ಸಿಲಿಂಡರ್ ಸಿಗ್ತಿಲ್ಲ ಎಂದು ಜನರು ಪ್ಯಾನಿಕ್ ಆಗಿರುವಾಗಲೇ ಎಲ್ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಮೋದಿ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಇನ್ಮುಂದೆ ಗ್ಯಾಸ್ ಬುಕ್ ಮಾಡೋರಿಗೆ ಈ ನಿಯಮ ಅನ್ವಯವಾಗಲಿದೆ.
ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಪ್ರಮುಖ ನಿರ್ಧಾರವನ್ನ ತೆಗೆದುಕೊಂಡಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಗ್ಯಾಸ್ ಸಿಲಿಂಡರ್ ಗಳ ಬುಕಿಂಗ್ ಅವಧಿಯನ್ನು ವಿಸ್ತರಿಸುವ ಆದೇಶಗಳನ್ನು ಹೊರಡಿಸಿದೆ. ಮನಿ ಕಂಟ್ರೋಲ್ ವರದಿಯ ಪ್ರಕಾರ, ಬುಕಿಂಗ್ ಅವಧಿಯನ್ನ 25 ದಿನಗಳಿಂದ 45 ದಿನಗಳಿಗೆ ಹೆಚ್ಚಿಸಲಾಗಿದೆ. ನಗರದಲ್ಲಿ ಡಬಲ್ ಸಿಲಿಂಡರ್ ಹೊಂದಿರುವವರಿಗೂ ಈ ನಿಯಮ ಅನ್ವಯವಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಈ ಕಠಿಣ ಪರಿಸ್ಥಿತಿಗೆ ಪ್ರತಿಕ್ರಿಯಿಸಿದ ಪೆಟ್ರೋಲಿಯಂ ಇಲಾಖೆಯ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, "ದೇಶವು ಹಿಂದೆಂದೂ ಇಂತಹ ಪರಿಸ್ಥಿತಿಯನ್ನು ಕಂಡಿರಲಿಲ್ಲ. ಹಾರ್ಮುಜ್ ಜಲಸಂಧಿಯ ಬಂದ್ ಆದ ಹಿನ್ನೆಲೆ ದೇಶೀಯ ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ" ಎಂದಿದ್ದಾರೆ. ಈ ಸಂದರ್ಭದಲ್ಲಿ, ಗ್ರಾಮೀಣ ಭಾಗದ ಗ್ರಾಹಕರು ತಮ್ಮ ಮುಂದಿನ ಸಿಲಿಂಡರ್ ಅನ್ನು 45 ದಿನಗಳ ನಂತರವೇ ಬುಕ್ ಮಾಡುವಂತೆ ನಿಯಮಗಳನ್ನ ಬದಲಾಯಿಸಲಾಗಿದೆ. ಸದ್ಯ ನಮ್ಮ ದೇಶವು ವಿವಿಧ ಪರ್ಯಾಯ ಮೂಲಗಳಿಂದ LPG ಅನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
ಗ್ಯಾಸ್ ಪೂರೈಕೆ ತಡವಾಗ್ತಿರುವ ಹಿನ್ನೆಲೆ ಜನರಲ್ಲಿ ಭೀತಿ ಉಂಟಾಗಿರುವುದ್ರಿಂದ ಬುಕಿಂಗ್ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. "ಸರಬರಾಜು ವ್ಯವಸ್ಥೆ ಖಾಲಿಯಾಗಿಲ್ಲ, ಆದ್ರೆ ಈ ಭೀತಿಯಿಂದಾಗಿ ಬುಕಿಂಗ್ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿದೆ" ಎಂದು ಸುಜಾತಾ ಶರ್ಮಾ ಹೇಳಿದ್ರು. ಪ್ಯಾನಿಕ್ ಆಗಿರೋ ಜನರು ಅಗತ್ಯಕ್ಕಿಂತ ಹೆಚ್ಚಿನ ಸಿಲಿಂಡರ್ ಗಳಿಗಾಗಿ ಸ್ಪರ್ಧಿಸುತ್ತಿರುವುದ್ರಿಂದ ವಿತರಣಾ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚುತ್ತಿದೆ. ಇದನ್ನು ನಿಯಂತ್ರಿಸಲು, ಬುಕಿಂಗ್ ಗಡುವನ್ನ ಹೆಚ್ಚಿಸಲಾಗಿದೆ ಎಂದು ಸುಜಾತಾ ಶರ್ಮಾ ಹೇಳಿದ್ದಾರೆ.
ವಾಣಿಜ್ಯ ಉದ್ದೇಶಗಳಿಗಾಗಿ ಅನಿಲ ಬಳಸುವವರಿಗೆ ಸರ್ಕಾರ ಸಿಹಿ ಸಂದೇಶವನ್ನ ನೀಡಿದೆ. ತೈಲ ಕಂಪನಿಗಳು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯದಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳನ್ನ ಬಿಡುಗಡೆ ಮಾಡುವುದಾಗಿ ಘೋಷಿಸಿವೆ. "ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯದಿಂದ, ತೈಲ ಕಂಪನಿಗಳು ಕೆಲವು 19 ಕೆಜಿ ವಾಣಿಜ್ಯ ಸಿಲಿಂಡರ್ ಗಳನ್ನು ಸಹ ಬಿಡುಗಡೆ ಮಾಡುತ್ತಿವೆ" ಎಂದು ಶರ್ಮಾ ಹೇಳಿದ್ದಾರೆ. ಯಾವ ಗ್ರಾಹಕರಿಗೆ ಯಾವ ಪ್ರದೇಶಗಳಲ್ಲಿ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರಗಳು ನಿರ್ಧರಿಸುತ್ತವೆ.
ಅಡುಗೆ ಅನಿಲದ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸರ್ಕಾರವು ಇತರ ಇಂಧನ ಮೂಲಗಳನ್ನು ಸಹ ಹೆಚ್ಚಿಸಿದೆ. ಈ ಹಿಂದೆ ನೀಡಲಾಗಿದ್ದ 1 ಲಕ್ಷ ಕಿಲೋಲೀಟರ್ ಸೀಮೆಎಣ್ಣೆಯ ಜೊತೆಗೆ ಇನ್ನೂ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನ ರಾಜ್ಯಗಳಿಗೆ ಬಿಡುಗಡೆ ಮಾಡುವುದಾಗಿ ಸರ್ಕಾರ ಘೋಷಿಸಿದೆ. "ಈ ಹಿಂದೆ ನೀಡಲಾಗಿದ್ದ 1 ಲಕ್ಷ ಕಿಲೋಲೀಟರ್ ಸೀಮೆಎಣ್ಣೆಯ ಜೊತೆಗೆ ಇನ್ನೂ 48,000 ಕಿಲೋಲೀಟರ್ ಸೀಮೆಎಣ್ಣೆಯನ್ನು ರಾಜ್ಯಗಳಿಗೆ ಬಿಡುಗಡೆ ಮಾಡುತ್ತೇವೆ"
ಪರಿಸರ ಸಚಿವಾಲಯವು ಕೆಲವು ವಿನಾಯಿತಿಗಳನ್ನು ನೀಡಿದೆ. ಹೋಟೆಲ್ ಗಳು ಮತ್ತು ವಾಣಿಜ್ಯ ಸಂಕೀರ್ಣಗಳು ಒಂದು ತಿಂಗಳ ಕಾಲ ಅಡುಗೆ ಉದ್ದೇಶಗಳಿಗಾಗಿ ಕಲ್ಲಿದ್ದಲು ಮತ್ತು ಸೀಮೆಎಣ್ಣೆಯನ್ನ ಬಳಸಲು ಅನುಮತಿಸಲಾಗಿದೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಈ ವಿನಾಯಿತಿ ಜಾರಿಯಲ್ಲಿರುತ್ತದೆ. ಸಾಮಾನ್ಯವಾಗಿ ಅಂತಹ ಇಂಧನಗಳ ಬಳಕೆಯ ಮೇಲೆ ನಿರ್ಬಂಧಗಳಿದ್ದರೂ, ಅನಿಲ ಕೊರತೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅಧಿಕಾರಿಗಳಿಗೆ ಈ ಕುರಿತು ಸಲಹೆಯನ್ನು ನೀಡಿದೆ.
ಮಾರ್ಚ್ 12 ರಂದು ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಸೀಮೆಎಣ್ಣೆಯಂತಹ ಇಂಧನಗಳ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ್ರು. ಅಲ್ಲದೆ, ಸಂಸ್ಕರಣಾಗಾರಗಳಲ್ಲಿ ಅನಿಲ ಉತ್ಪಾದನೆಯನ್ನು ಹೆಚ್ಚಿಸಲು ಮಾರ್ಚ್ 5 ರಂದು ಹೊರಡಿಸಲಾದ ಆದೇಶವು ದೇಶೀಯ ಎಲ್‌ಪಿಜಿ ಉತ್ಪಾದನೆಯನ್ನು ಶೇಕಡಾ 28 ರಷ್ಟು ಹೆಚ್ಚಿಸಿದೆ.
ಗ್ಯಾಸ್ ಸಿಲಿಂಡರ್ ಬುಕ್ ಮಾಡುವವರಿಗೆ ಕೇಂದ್ರದಿಂದ ಮತ್ತೊಂದು ಬಿಗ್ ಶಾಕ್! ಈ ಹೊಸ ನಿಯಮ ಅನ್ವಯ
ಇದು ಮುಂದಿನ ದಿನಗಳಲ್ಲಿ ಪೂರೈಕೆಯನ್ನ ಸುಧಾರಿಸುವ ಸಾಧ್ಯತೆಯಿದೆ. ಸರ್ಕಾರ ತೆಗೆದುಕೊಂಡ ಈ ಕ್ರಮಗಳು ಇಂಧನ ಮಾರುಕಟ್ಟೆಗೆ ಸ್ಥಿರತೆಯನ್ನು ತರುತ್ತವೆ ಎಂದು ಸಚಿವರು ತಿಳಿಸಿದ್ದಾರೆ. ಜನರು ಪ್ಯಾನಿಕ್ ಆಗೋ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳ್ತಿದೆ.