ನವದೆಹಲಿ: ದೇಶಾದ್ಯಂತ ರೈಲು ಜಾಲ ವಿಸ್ತರಣೆ ಆಗುತ್ತಿದೆ. ರೈಲ್ವೆ ಮೂಲ ಸೌಕರ್ಯ ಸುಧಾರಿಸುವ ಜೊತೆಗೆ ಅಮೃತ್ ಭಾರತ್ ಸ್ಟೇಷನ್ ಅಡಿಯಲ್ಲಿ ಸಹಸ್ರಾರು ರೈಲು ನಿಲ್ದಾಣಗಳು ಪುನರ್ ಅಭೀವೃದ್ಧಿಯಾಗಿ, ಆಧುನಿಕರಣಗೊಳ್ಳುತ್ತಿವೆ. ಈ ಮಧ್ಯೆ ವಿವಿಧ ರೈಲು ನಿಲ್ದಾಣಗಳಲ್ಲಿ 76 ಪ್ರಯಾಣಿಕರ ನಿಲುಗಡೆ ತಾಣಗಳನ್ನು (ಪ್ಯಾಸೆಂಜರ್ ಹೋಲ್ಡಿಂಗ್ ಏರಿಯಾ) ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ರೈಲ್ವೆ ಸಚಿವ ಸಚಿವರಾದ ಅಶ್ವಿನಿ ವೈಷ್ಣವ್ ಅನುಮೋದನೆ ನೀಡಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ನಿಲುಗಡೆ ತಾಣದ ಯಶಸ್ಸಿನ ನಂತರ ಬೇರೆ ನಿಲ್ದಾನಗಳಲ್ಲೂ ಈ ಸೌಲಭ್ಯ ಕಲ್ಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಈ ಕಾರಣದಿಂದಲೇ ಕರ್ನಾಟಕದ ಬೆಂಗಳೂರು ಎಸ್‌ಎಂವಿಟಿ , ಯಶವಂತಪುರ, ಕೃಷ್ಣರಾಜಪುರಂ ಹಾಗೂ ಮೈಸೂರು ರೈಲು ನಿಲ್ದಾಣಗಳು ಸೇರಿದಂತೆ ದೇಶಾದ್ಯಂತ ವಿವಿಧ ರೈಲು ನಿಲ್ದಾಣಗಳಲ್ಲಿ 76 ಪ್ರಯಾಣಿಕರ ನಿಲುಗಡೆ ತಾಣ ಅಭಿವೃದ್ಧಿಪಡಿಸುವ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಈ ನಿಲುಗಡೆ ತಾಣಗಳು ಹೇಗಿರುತ್ತವೆ?
ದೇಶಾದ್ಯಂತ ಯೋಜಿಸಲಾದ ಹೊಸ ಪ್ರಯಾಣಿಕರ ನಿಲುಗಡೆ ತಾಣಗಳು ಮಾಡ್ಯುಲರ್ ವಿನ್ಯಾಸವನ್ನು ಹೊಂದಿರಲಿವೆ. ಆಯಾ ನಿಲ್ದಾಣಗಳಲ್ಲಿ ಸ್ಥಳೀಯ ವಿಶೇಷತೆಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ನಿರ್ಮಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. 2026ರಲ್ಲಿ ಮಧ್ಯಭಾಗದ ಹೊತ್ತಿಗೆ ಎಲ್ಲಾ ಪ್ರಯಾಣಿಕರ ನಿಲುಗಡೆ ತಾಣಗಳು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾಗಿ ಅವರು ತಿಳಿಸಿದ್ದಾರೆ.
ನವದೆಹಲಿ ನಿಲ್ದಾಣವು ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿನ ಪ್ರಯಾಣಿಕರ ನಿಲುಗಡೆ ತಾಣ ಸಹಾಯದಿಂದ ದೀಪಾವಳಿ ಮತ್ತು ಛತ್ ಹಬ್ಬಗಳ ಸಮಯದಲ್ಲಿ ಭಾರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿದೆ. ನವದೆಹಲಿ ನಿಲ್ದಾಣದಲ್ಲಿ ಈ ಪ್ರಯಾಣಿಕರ ನಿಲುಗಡೆ ತಾಣವನ್ನು ನಾಲ್ಕು ತಿಂಗಳಲ್ಲಿ ಪೂರ್ಣಗೊಳಿಸಲಾಯಿತು. ನವದೆಹಲಿ ರೈಲ್ವೆ ನಿಲ್ದಾಣದಲ್ಲಿರುವ 'ಯಾತ್ರಿ ಸುವಿಧಾ ಕೇಂದ್ರ'ವನ್ನು (ಶಾಶ್ವತ ಜನ ಜಮಾವಣೆ ತಾಣ) ಯಾವುದೇ ಸಮಯದಲ್ಲಿ ಸುಮಾರು 7,000 ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ ಎಂದರು.
ಇನ್ನೂ ರೈಲು ಹತ್ತುವ ಮುನ್ನ ಪ್ರಯಾಣಿಕರ ಆರಾಮದಾಯಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುವುದಲ್ಲದೆ, ಪ್ರಯಾಣಿಕರ ಹರಿವನ್ನು ಸುಧಾರಿಸುತ್ತದೆ. ಪ್ರಯಾಣಿಕರ ಚಲನೆಯನ್ನು ಸುವ್ಯವಸ್ಥಿತಗೊಳಿಸಲು ಈ ಸೌಲಭ್ಯವನ್ನು ಟಿಕೆಟಿಂಗ್, ಪೋಸ್ಟ್-ಟಿಕೆಟಿಂಗ್ ಮತ್ತು ಪ್ರಿ-ಟಿಕೆಟಿಂಗ್ ಎಂಬ ಮೂರು ವಲಯಗಳಾಗಿ ವಿಂಗಡಿಸಲಾಗಿದೆ.
ನಿಲುಗುಡೆ ತಾಣಗಳು ಹೇಗಿರಲಿವೆ?
ನವದೆಹಲಿ ನಿಲ್ದಾಣ ಪ್ರಯಾಣಿಕರ ಜಮಾವಣೆ ತಾಣವು 7,000ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದೆ. ಇದು ಪುರುಷರು ಮತ್ತು ಮಹಿಳೆಯರಿಗೆ ತಲಾ 150 ಶೌಚಾಲಯಗಳು, ಟಿಕೆಟ್ ಕೌಂಟರ್‌ಗಳು, ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳು ಮತ್ತು ಉಚಿತ ಶುದ್ಧೀಕರಿಸಿದ ನೀರಿನ ಘಟಕಗಳನ್ನು ಹೊಂದಿದೆ. ಇದೇ ರೀತಿ ದೇಶದ ವಿವಿಧ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಈ ಮೂಲಕ ಹಬ್ಬಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ನಿಲ್ದಾಣಗಳಲ್ಲಿ ಹೆಚ್ಚಾಗುವ ಜನದಟ್ಟಣೆಯಲ್ಲಿ ನಿಯಂತ್ರಿಸಲು ಅನುಕೂಲ ಒದಗಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ನಿಲುಗಡೆ ತಾಣ ನಿರ್ಮಾಣವಾಗುವ ರೈಲು ನಿಲ್ದಾಣಗಳು
ಮುಂಬೈ ಸಿಎಸ್ಎಂಟಿ, ಲೋಕಮಾನ್ಯ ತಿಲಕ್ ಟರ್ಮಿನಸ್, ನಾಗಪುರ, ನಾಸಿಕ್ ರಸ್ತೆ, ಪುಣೆ, ದಾದರ್, ಹೌರಾ, ಸೀಲ್ಡಾ, ಅಸನ್ಸೋಲ್, ಭಾಗಲ್ಪುರ್, ಜಸಿದಿಹ್, ಪಾಟ್ನಾ, ದಾನಾಪುರ, ಮುಜಾಫರ್ ಪುರ್, ಗಯಾ, ದರ್ಭಂಗಾ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ನಿಲ್ದಾಣ.
ಭುವನೇಶ್ವರ, ವಿಶಾಖಪಟ್ಟಣಂ, ಪುರಿ, ನವದೆಹಲಿ, ಆನಂದ್ ವಿಹಾರ್ ಟರ್ಮಿನಲ್, ಹಜರತ್ ನಿಜಾಮುದ್ದೀನ್, ದೆಹಲಿ, ಗಾಜಿಯಾಬಾದ್, ಜಮ್ಮು ತಾವಿ, ಶ್ರೀ ಮಾತಾ ವೈಷ್ಣೋದೇವಿ ಕತ್ರಾ, ಲುಧಿಯಾನ, ಲಕ್ನೋ (ಎನ್ಆರ್), ವಾರಣಾಸಿ, ಅಯೋಧ್ಯೆ ಧಾಮ್, ಹರಿದ್ವಾರ.
ಕಾನ್ಪುರ, ವೀರಾಂಗನಾ ಲಕ್ಷ್ಮಿ ಬಾಯಿ ಝಾನ್ಸಿ, ಮಥುರಾ, ಆಗ್ರಾ ಕಂಟೋನ್ಮೆಂಟ್. ಗೋರಖ್‌ಪುರ, ಬನಾರಸ್, ಛಾಪ್ರಾ, ಲಕ್ನೋ ಜಂಕ್ಷನ್ (ನಾರ್), ಗುವಾಹಟಿ, ಕತಿಹಾರ್, ಜೈಪುರ, ಗಾಂಧಿ ನಗರ ಜೈಪುರ, ಅಜ್ಮೀರ್, ಜೋಧಪುರ, ರಿಂಗಾಸ್, ಎಂ.ಜಿ.ಆರ್. ಚೆನ್ನೈ ಸೆಂಟ್ರಲ್, ಚೆನ್ನೈ ಎಗ್ಮೋರ್, ಕೊಯಮತ್ತೂರು ಜಂಕ್ಷನ್, ಎರ್ನಾಕುಲಂ ಜಂಕ್ಷನ್. ಸಿಕಂದರಾಬಾದ್, ವಿಜಯವಾಡ, ತಿರುಪತಿ, ಗುಂಟೂರು, ಕಾಚಿಗುಡ, ರಾಜಮಂಡ್ರಿ ರೈಲು ನಿಲ್ದಾಣಗಳು.
ರಾಂಚಿ, ಟಾಟಾ, ಶಾಲಿಮಾರ್ ರಾಯ್ ಪುರ್, ಎಸ್‌ಎಂವಿಟಿ ಬೆಂಗಳೂರು, ಯಶವಂತಪುರ, ಮೈಸೂರು, ಕೃಷ್ಣರಾಜಪುರಂ , ಮುಂಬೈ ಸೆಂಟ್ರಲ್, ಬಾಂದ್ರಾ ಟರ್ಮಿನಸ್, ಉದ್ನಾ, ಸೂರತ್, ಅಹಮದಾಬಾದ್, ಉಜ್ಜಯಿನಿ, ವಡೋದರಾ, ಸೆಹೋರ್, ಭೋಪಾಲ್, ಜಬಲ್ಪುರ್ ರೈಲು ನಿಲ್ದಾಣಗಳಲ್ಲಿ ನಿರ್ಮಾಣವಾಗಲಿದೆ.