ಉದ್ಯೋಗಿಗಳಿಗೆ ಗುಡ್‌ನ್ಯೂಸ್‌: ಪಿಎಫ್‌ 2025 - 26ಕ್ಕೆ ಶೇ 8.25 ಬಡ್ಡಿ ದರ - ಇಪಿಎಫ್‌ಒ ಮಹತ್ವದ ನಿರ್ಧಾರ

ಉದ್ಯೋಗಿಗಳಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಸಿಹಿ ಸುದ್ದಿ ನೀಡಿದೆ. ಶೇಕಡಾ 8.25 ರಷ್ಟು ಬಡ್ಡಿ ದರ ಮುಂದುವರೆಸಲು ನಿರ್ಧಾರ ಮಾಡಲಾಗಿದೆ. ಈ ಮೂಲಕ ಮಾರುಕಟ್ಟೆ ಏರಿಳಿತಗಳಿಂದ ಆತಂಕದಲ್ಲಿದ್ದ ನೌಕರರಿಗೆ ಸಮಾಧಾನವಾಗಿದೆ. ಹಣಕಾಸು ಸಚಿವಾಲಯದ ಒಪ್ಪಿಗೆ ಸಿಕ್ಕ ಬಳಿಕ ಹಣ ಉದ್ಯೋಗಿಗಳ ಖಾತೆಗೆ ಜಮೆಯಾಗಲಿದೆ. ಇನ್ನು ಪಿಎಫ್‌ ಲೆಕ್ಕಾಚಾರ ಮಾಡುವುದು ಹೇಗೆ? ಬಡ್ಡಿ ಯಾವಾಗ ಸಿಗುತ್ತೆ? ಈ ಬಗ್ಗೆ ವಿವರ ಇಲ್ಲಿದೆ.

ಭವಿಷ್ಯ ನಿಧಿ (ಪಿಎಫ್‌) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬದಲಾವಣೆಯಾಗಿಲ್ಲ.2025 - 26ನೇ ಆರ್ಥಿಕ ವರ್ಷಕ್ಕೂ ಶೇಕಡಾ 8.25 ರಷ್ಟು ಬಡ್ಡಿ ದರ ನಿಗದಿ.ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಇಳಿಕೆಯಾಗಬಹುದು ಎಂಬ ಆತಂಕದಲ್ಲಿದ್ದ ನೌಕರರಿಗೆ ಸಂತಸ.

ಇಪಿಎಫ್‌ಒ 2025 - 26 ನೇ ವರ್ಷದ ಬಡ್ಡಿ ದರ ನಿಗದಿ.(ಗ್ಯಾಲರಿ- Agencies)

ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್‌ಒ) 2025 - 26ನೇ ಆರ್ಥಿಕ ವರ್ಷಕ್ಕೆ ಭವಿಷ್ಯ ನಿಧಿ (ಪಿಎಫ್‌) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬದಲಾವಣೆ ಮಾಡಿಲ್ಲ. ಶೇಕಡಾ 8.25 ರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮಾರುಕಟ್ಟೆಯ ಏರಿಳಿತಗಳ ನಡುವೆಯೂ ಇಳಿಕೆಯಾಗಬಹುದು ಎಂಬ ಆತಂಕದಲ್ಲಿದ್ದ ನೌಕರರಿಗೆ ಸಂತಸವಾಗಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ (ಸಿಬಿಟಿ) 239ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಚಂದಾದಾರರು ತಮ್ಮ ನಿವೃತ್ತಿ ಉಳಿತಾಯದ ಮೇಲೆ ಕಳೆದ ವರ್ಷದಷ್ಟೇ ಆದಾಯವನ್ನು ಈ ವರ್ಷವೂ ಪಡೆಯಲಿದ್ದಾರೆ.

ಸುಮಾರು 7.8 ಕೋಟಿಗೂ ಹೆಚ್ಚು ಪಿಎಫ್ ಸದಸ್ಯರಿಗೆ ಅನ್ವಯವಾಗಲಿದೆ. ಸಿಬಿಟಿ ತೆಗೆದುಕೊಂಡಿರುವ ಈ ನಿರ್ಧಾರವನ್ನು ಅಂತಿಮ ಅನುಮೋದನೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ನಂತರ, ಪ್ರಸ್ತುತ ಆರ್ಥಿಕ ವರ್ಷದ ಬಡ್ಡಿ ಮೊತ್ತವನ್ನು ಚಂದಾದಾರರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ.

ಬಡ್ಡಿ ದರ ಹಿಂದಿನ ವರ್ಷ ಏನಿತ್ತು?

2024 ರಲ್ಲಿ ಬಡ್ಡಿ ದರವನ್ನು ಶೇಕಡಾ. 8.15 ರಿಂದ ಶೇಕಡಾ. 8.25 ಕ್ಕೆ ಏರಿಸಲಾಗಿತ್ತು. ಅಂದಿನಿಂದ ದರದಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಮಾಡಲಾಗಿಲ್ಲ. ಇದಕ್ಕೂ ಮುನ್ನ, 2021-22ರಲ್ಲಿ ಬಡ್ಡಿ ದರವು ಶೇ. 8.10 ಕ್ಕೆ ಇಳಿದಿತ್ತು, ಇದು ಕಳೆದ ನಾಲ್ಕು ದಶಕಗಳಲ್ಲೇ (1977-78 ರ ನಂತರ) ಅತ್ಯಂತ ಕಡಿಮೆ ದರವಾಗಿತ್ತು.

ಪಿಎಫ್ ಬಡ್ಡಿ ಲೆಕ್ಕಾಚಾರ ಮಾಡುವುದು ಹೇಗೆ ?

ಅನೇಕ ಉದ್ಯೋಗಿಗಳಿಗೆ ತಮ್ಮ ಖಾತೆಯಲ್ಲಿ ಬಡ್ಡಿ ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ಗೊಂದಲವಿರುತ್ತದೆ. ಪಿಎಫ್ ಖಾತೆಯಲ್ಲಿರುವ ಚಾಲ್ತಿ ಮೊತ್ತದ ಮೇಲೆ ಪ್ರತಿ ತಿಂಗಳು ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಆದರೆ, ಈ ಮೊತ್ತವನ್ನು ಆರ್ಥಿಕ ವರ್ಷದ ಕೊನೆಯಲ್ಲಿ ಒಮ್ಮೆ ಮಾತ್ರ ಖಾತೆಗೆ ಜಮೆ ಮಾಡಲಾಗುತ್ತದೆ. ಉದಾಹರಣೆಗೆ ಪ್ರತಿ ತಿಂಗಳು ಉದ್ಯೋಗಿ ಕಡೆಯಿಂದ 2 ಸಾವಿರ, ಕಂಪನಿ ಕಡೆಯಿಂದ 2 ಸಾವಿರ ಸೇರಿ 4 ಸಾವಿರ ರೂ. ಖಾತೆಗೆ ಜಮೆಯಾದರೆ ಬಡ್ಡಿ ಮೊತ್ತ ಸೇರಿ ವರ್ಷಕ್ಕೆ 51,960 ರೂ. ಆಗಲಿದೆ. 3960 ರೂ. ಬಡ್ಡಿ ಜಮೆಯಾಗಲಿದೆ.

ಪಿಎಫ್ ಖಾತೆಯನ್ನು ಸಕ್ರಿಯವಾಗಿಡುವುದು ಮುಖ್ಯ. ಒಂದು ವೇಳೆ ಸತತ 36 ತಿಂಗಳುಗಳವರೆಗೆ (3 ವರ್ಷ) ಖಾತೆಗೆ ಯಾವುದೇ ವಂತಿಕೆ ಬರದಿದ್ದರೆ, ಆ ಖಾತೆಯನ್ನು 'ನಿಷ್ಕ್ರಿಯ' ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಬಡ್ಡಿ ಬರುವುದು ಸ್ಥಗಿತವಾಗಲಿದೆ.


Previous Post Next Post