ಅಡುಗೆ ಅನಿಲ ಪಡಿತರ ಆರಂಭ | ಹೊಸ ಸಿಲಿಂಡರ್ ಬುಕ್ ಮಾಡುವ ಅವಧಿ ಗ್ರಾಮೀಣಕ್ಕೆ 45, ನಗರಕ್ಕೆ 25 ದಿನಗಳಿಗೆ ವಿಸ್ತರಣೆ

ಸೀಮೆಎಣ್ಣೆ ಪೂರೈಕೆಗೆ ಕ್ರಮ: ಕೇಂದ್ರ ಸರ್ಕಾರ ಘೋಷಣೆ ಅಡುಗೆ ಅನಿಲದ ಕೊರತೆಯನ್ನು ಕೆಲವು ದಿನಗಳಿಂದ ನಿರಾಕರಿಸುತ್ತಲೇ ಬಂದಿರುವ ಕೇಂದ್ರ ಸರ್ಕಾರ, ಪೂರೈಕೆಯಲ್ಲಿ ಕೊರತೆಯಿದೆ ಎನ್ನುವುದನ್ನು ಗುರುವಾರ ಒಪ್ಪಿಕೊಂಡಿದ್ದು, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆದಾರರಿಬ್ಬರಿಗೂ ಬೇಡಿಕೆ–ನಿಭಾವಣೆ ಕ್ರಮಗಳನ್ನು ಜಾರಿಗೊಳಿಸಿದೆ.

ಬೇಡಿಕೆ–ನಿಭಾವಣೆ ಕ್ರಮಗಳ ಭಾಗವಾಗಿ, ತುಂಬಿದ ಹೊಸ ಸಿಲಿಂಡರ್ಗೆ ಬೇಡಿಕೆ ಸಲ್ಲಿಸುವ ಅವಧಿಯನ್ನು ಗ್ರಾಮೀಣ ಪ್ರದೇಶಗಳಿಗೆ 45 ಮತ್ತು ನಗರ ಪ್ರದೇಶಗಳಿಗೆ 25 ದಿನಗಳಿಗೆ ವಿಸ್ತರಿಸಲಾಗಿದೆ. ಈ ಮೊದಲು ಈ ಅವಧಿ ದೇಶಾದ್ಯಂತ 21 ದಿನಗಳಾಗಿತ್ತು.

ಇನ್ನೊಂದು ಮಹತ್ವದ ಕ್ರಮವೆಂದರೆ, ವಾಣಿಜ್ಯ ಅಡುಗೆ ಅನಿಲದ ಸರಾಸರಿ ಮಾಸಿಕ ಬೇಡಿಕೆಯ ಕೇವಲ 20 ಶೇಕಡದಷ್ಟನ್ನು ತೈಲ ಮಾರುಕಟ್ಟೆ ಕಂಪೆನಿಗಳು ಗುರುವಾರದಿಂದ ಪೂರೈಸಲಿವೆ ಎಂದು ಸರ್ಕಾರ ತಿಳಿಸಿದೆ. ಇದಕ್ಕೂ ಮೊದಲು ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಗೆ ಆದ್ಯತೆ ನೀಡುವಂತೆ ಸರ್ಕಾರ ತೈಲ ಮಾರುಕಟ್ಟೆ ಕಂಪೆನಿಗಳಿಗೆ ನಿರ್ದೇಶನ ನೀಡಿತ್ತು. ಇದನ್ನು ಹೊಟೇಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಉದ್ಯಮಗಳು ಪ್ರತಿಭಟಿಸಿದ್ದವು.

ಅಡುಗೆ ಅನಿಲದ ಸಂಗ್ರಹಣೆ ಮತ್ತು ಕಾಳಸಂತೆಯಲ್ಲಿ ಮಾರಾಟವನ್ನು ತಡೆಯುವುದಕ್ಕಾಗಿ ವಾಣಿಜ್ಯ ಅಡುಗೆ ಅನಿಲ ಪೂರೈಕೆಯನ್ನು ನಿಯಂತ್ರಿಸಲಾಗುತ್ತಿದೆ ಎಂದು ಪೆಟ್ರೋಲಿಯಮ್ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು. ಎಲ್ಎನ್ಜಿ ಹೊತ್ತ ಬೃಹತ್ ಹಡಗುಗಳು ಪ್ರತಿದಿನ ಪರ್ಯಾಯ ಪೂರೈಕೆ ಮಾರ್ಗಗಳ ಮೂಲಕ ಬರುತ್ತಿವೆ ಎಂದು ಹೇಳಿದ ಅವರು, ಪಶ್ಚಿಮ ಏಶ್ಯ ಸಂಘರ್ಷವು ದೀರ್ಘಾವಧಿಗೆ ಮುಂದುವರಿದರೂ ಅಡುಗೆ ಅನಿಲದ ಪೂರೈಕೆಯನ್ನು ಕಾಪಾಡಿಕೊಳ್ಳಲು ಭಾರತವು ಎಲ್ಲಾ ಏರ್ಪಾಡುಗಳನ್ನು ಮಾಡಿದೆ ಎಂದು ಹೇಳಿದರು.

ಅದರ ಜೊತೆಗೆ, ಅಡುಗೆ ಅನಿಲ ಮತ್ತು ನೈಸರ್ಗಿಕ ಅನಿಲ ಪೂರೈಕೆಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಸರ್ಕಾರ ಪರ್ಯಾಯ ಇಂಧನ ಆಯ್ಕೆಗಳನ್ನೂ ತೆರೆದಿದೆ ಎಂದು ಅವರು ನುಡಿದರು. ಚಿಲ್ಲರೆ ಮಾರಾಟ ಅಂಗಡಿಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸೀಮೆಎಣ್ಣೆ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರಿಗೆ ಇಂಧನ ತೈಲವನ್ನು ಪೂರೈಸಲಾಗುತ್ತಿದೆ ಎಂದು ಹೇಳಿದರು.

ಬಿಕ್ಕಟ್ಟಿನ ಅವಧಿಯಲ್ಲಿ ಇಂಥ ಇಂಧನಗಳ ಬಳಕೆಗೆ ತಾತ್ಕಾಲಿಕ ಅನುಮತಿ ನೀಡುವಂತೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸಲಹೆ ನೀಡಿದೆ.



Previous Post Next Post