ಇತ್ತೀಚೆಗೆ ಕಾರ್ಯಕ್ರಮದಲ್ಲಿ ದಾವಣಗೆರೆ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದಲೇ ಆಕ್ಷೇಪ ವ್ಯಕ್ತವಾಗಿದೆ. ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವುದು ಸರಿಯಲ್ಲ, ಅಪ್ಪ ಮಕ್ಕಳು ಈ ನಡೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಯಡಿಯೂರಪ್ಪ ಅವರ ಈ ನಡೆಯನ್ನು ಖಂಡಿಸಿ ಬಿಜೆಪಿ ಮುಖಂಡರು ದಾವಣಗೆರೆಯಲ್ಲಿ ಸಭೆ ಆಯೋಜನೆಗೆ ನಿರ್ಧರಿಸಿದ್ದಾರೆ.
ದಾವಣಗೆರೆ 8 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆಗೆ ಮಾಡಿ ಬಿಎಸ್ ಯಡಿಯೂರಪ್ಪ ಆಕ್ಷೇಪ.ತಂದೆ - ಮಕ್ಕಳು ಹೇಳಿಕೆ ಹಿಂಪಡೆಯಬೇಕು ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಹಾಗೂ ಮುಖಂಡರು ಆಗ್ರಹ.ಬಿಎಸ್‌ವೈ ಹೇಳಿಕೆ ವಿರೋಧಿಸಿ ದಾವಣಗೆರೆ ಜಿಎಂಐಟಿ ಕಾಲೇಜು ಆವರಣದಲ್ಲಿ ಮಾ.5ರಂದು ಬಿಜೆಪಿ ಮುಖಂಡರು ಸಭೆ.
ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಜಿಲ್ಲೆಯ ಎಲ್ಲ ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ದಾವಣಗೆರೆ ಲೋಕಸಭೆ ಕ್ಷೇತ್ರದ 8 ವಿಧಾನಸಭೆ ಕ್ಷೇತ್ರಗಳ ಬಿಜೆಪಿ ಆಕಾಂಕ್ಷಿಗಳು ಹಾಗೂ ಮುಖಂಡರು ಆಗ್ರಹಿಸಿದ್ದಾರೆ.
ಕಳೆದ ವಾರ ಹೊನ್ನಾಳಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಬಿಎಸ್ ಯಡಿಯೂರಪ್ಪ, ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 140ರಿಂದ 150ಕ್ಕೂ ಹೆಚ್ಚಿನ ಸ್ಥಾನ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯುವುದು ಸೂರ್ಯ- ಚಂದ್ರರಷ್ಟೆ ಸತ್ಯ. ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ರಾಮಚಂದ್ರಪ್ಪ ಸೇರಿದಂತೆ ದಾವಣಗೆರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಶ್ರಮಿಸಬೇಕು’ ಎಂದು ಹೇಳಿದ್ದರು.
ಆ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಚನ್ನಗಿರಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ಕೆಜಿಎಫ್ ಮಾಜಿ ಶಾಸಕ ಸಂಪಂಗಿ, ಹರಿಹರ ಮುಖಂಡ ಚಂದ್ರಶೇಖರ ಪೂಜಾರ್, ದಾವಣಗೆರೆ ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್ ಇದ್ದರು.
ರೇಣುಕಾಚಾರ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಘಟನೆ
ದಾವಣಗೆರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಬಿಜೆಪಿ ಮುಖಂಡ ಶಾಂತರಾಜ ಪಾಟೀಲ್, ''ಹೊನ್ನಾಳಿಯಲ್ಲಿ ಇತ್ತೀಚೆಗೆ ನಡೆದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಎಸ್‌ವೈ, ಎಲ್ಲಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿ, ಅವರೆಲ್ಲರನ್ನೂ ಗೆಲ್ಲಿಸುವಂತೆ, ಆ ಮೂಲಕ ರೇಣುಕಾಚಾರ್ಯ ಅವರನ್ನು ಸಚಿವರನ್ನಾಗಿ ಮಾಡುವಂತೆ ಕರೆ ನೀಡಿದ್ದಾರೆ,'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಭ್ಯರ್ಥಿಗಳ ಹೆಸರು ಘೋಷಿಸಿರುವುದು ಸರಿಯಲ್ಲ
''ಬಿಎಸ್ ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಜವಾಬ್ದಾರಿ ಅರಿತು ಮಾತನಾಡಬೇಕು. ಪಕ್ಷ ಯಾರನ್ನೇ ಕಣಕ್ಕಿಳಿಸಿದರೂ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಬೇಕು. ಅದು ಬಿಟ್ಟು ಚುನಾವಣೆಗೆ 2 ವರ್ಷ ಇರುವಾಗಲೇ ಅಭ್ಯರ್ಥಿಗಳ ಹೆಸರು ಘೋಷಿಸಿರುವುದು ಸರಿಯಲ್ಲ. ಬಿಎಸ್‌ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಬ್ಬರಿಗೂ ಅಭ್ಯರ್ಥಿಗಳ ಹೆಸರು ಘೋಷಿಸುವುದೇ ಅಭ್ಯಾಸವಾಗಿ ಹೋಗಿದೆ. ಇದರಿಂದಾಗಿಯೇ ದಾವಣಗೆರೆ ಸೇರಿ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪಕ್ಷದ ಸ್ಥಿತಿ 'ಮನೆಯೊಂದು ಮೂರು ಬಾಗಿಲು' ಎಂಬಂತಾಗಿದೆ,'' ಎಂದು ಆರೋಪಿಸಿದರು.
ಬಿಜೆಪಿಯಲ್ಲಿದ್ದು ಕೊಂಡೇ ಕಾಂಗ್ರೆಸ್ ಕೆಲಸ ಮಾಡುತ್ತಾರೆ
''ಯಡಿಯೂರಪ್ಪ ಅವರು ಘೋಷಣೆ ಮಾಡಿದ ಎಲ್ಲಅಭ್ಯರ್ಥಿಗಳು ಈ ಹಿಂದೆ ದಾವಣಗೆರೆ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದರು. ಒಂದು ರೀತಿ ಶಾಮನೂರು ಕೃಪಾ ಪೋಷಿತ ಮಿತ್ರ ಮಂಡಳಿ ನಾಟಕ ಕಂಪನಿ ಸದಸ್ಯರಂತಿರುವ ಇವರು, ಬಿಜೆಪಿಯಲ್ಲಿದ್ದು ಕೊಂಡೇ ಕಾಂಗ್ರೆಸ್ ಕೆಲಸ ಮಾಡುತ್ತಾರೆ'' ಎಂದು ದೂರಿದರು.
ಗೋಷ್ಠಿಯಲ್ಲಿ ಚನ್ನಗಿರಿ ಮುಖಂಡ, ತುಮ್ಕೋಸ್ ಅಧ್ಯಕ್ಷ ಎಚ್.ಎಸ್.ಶಿವಕುಮಾರ್, ಮಾಜಿ ಶಾಸಕ ಎಚ್.ಪಿ.ರಾಜೇಶ್, ಮಾಯಕೊಂಡ ಮುಖಂಡ ಮಂಜಾನಾಯ್ಕ, ಜೀವನಮೂರ್ತಿ, ಶ್ಯಾಮ್, ಮಹೇಶ್, ಗಿರೀಶ್, ದೇವೇಂದ್ರಪ್ಪ, ರಮೇಶ್ ಇತರರಿದ್ದರು.
ಜಿಎಂಐಟಿಯಲ್ಲಿ5ಕ್ಕೆ ಸಭೆ
ಬಿಎಸ್‌ವೈ ಅವರ ಹೇಳಿಕೆ ಖಂಡಿಸಿ ನಗರದ ಜಿಎಂಐಟಿ ಕಾಲೇಜು ಆವರಣದಲ್ಲಿ ಮಾ.5ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲೆಯ ಎಲ್ಲ ಕ್ಷೇತ್ರಗಳ ಮುಖಂಡರ ಸಭೆ ನಡೆಸಲಾಗುವುದು. ಪ್ರತಿ ಕ್ಷೇತ್ರದಿಂದ 100ಕ್ಕೂ ಅಧಿಕ ಮುಖಂಡರು ಒಳಗೊಂಡಂತೆ ಸಾವಿರಕ್ಕೂ ಹೆಚ್ಚುಮಂದಿ ಈ ಸಭೆಯಲ್ಲಿ ಭಾಗವಹಿಸಲಿದ್ದು, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಹರಿಹರ ಶಾಸಕ ಬಿ.ಪಿ. ಹರೀಶ್ ಇತರ ಮುಖಂಡರು ಭಾಗವಹಿಸುವರು. ರಾಜ್ಯ ಮತ್ತು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡುವುದು ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನ್ಯಾಯ ಒದಗಿಸಲು ಹೋರಾಟದ ರೂಪುರೇಷೆ ರಚಿಸುವ ಕುರಿತು ಸಭೆಯಲ್ಲಿಚರ್ಚಿಸಲಾಗುವುದು ಎಂದು ಶಾಂತರಾಜ ತಿಳಿಸಿದರು.