ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧಿಯಾದ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ನಡೆಯಲಿರುವ ಈ ಭವ್ಯ ಉತ್ಸವಕ್ಕೆ ಲಕ್ಷಾಂತರ ಭಕ್ತರು ಸಾಗರೋಪಾದಿಯಲ್ಲಿ ಹರಿದುಬರುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ನಗರದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಕೆಎಸ್‌ಆರ್‌ಟಿಸಿ (KSRTC) ಇಂದಿನಿಂದಲೇ ಅನ್ವಯವಾಗುವಂತೆ ಬಸ್ ನಿಲ್ದಾಣ ಮತ್ತು ಸಂಚಾರ ಮಾರ್ಗಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ.
ನಗರದ ಒಳಭಾಗದಲ್ಲಿ ಜನದಟ್ಟಣೆ ತಪ್ಪಿಸಲು ಹಾಲಿ ಇರುವ ‘ಕೇಂದ್ರ ಬಸ್ ನಿಲ್ದಾಣ’ವನ್ನು ತಾತ್ಕಾಲಿಕವಾಗಿ ಗಣೇಶ ನಗರದ ಬಸ್ ನಿಲ್ದಾಣಕ್ಕೆ(ಹೊಸ ಬಸ್ ನಿಲ್ದಾಣ) ಸ್ಥಳಾಂತರಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ್ ಮಾಹಿತಿ ನೀಡಿದ್ದಾರೆ.
ಬದಲಾದ ಸಂಚಾರ ವ್ಯವಸ್ಥೆಯ ಸಂಪೂರ್ಣ ವಿವರ ಇಲ್ಲಿದೆ: ಕುಮಟಾ ಮತ್ತು ಸಿದ್ದಾಪುರ ಮಾರ್ಗದಿಂದ ಬರುವ ಬಸ್‌ಗಳು ಹನುಮಾನ್ ವ್ಯಾಯಾಮ ಶಾಲೆ ಬಳಿ ಪ್ರಯಾಣಿಕರನ್ನು ಇಳಿಸಿ, ನಂತರ ಗಣೇಶ ನಗರದ ತಾತ್ಕಾಲಿಕ ನಿಲ್ದಾಣಕ್ಕೆ ತೆರಳಲಿವೆ. ಮರಳಿ ಹೋಗುವಾಗ ಅಂಬೇಡ್ಕರ್ ಸರ್ಕಲ್ ಮೂಲಕ ಸಾಗಲಿವೆ.
ಹುಬ್ಬಳ್ಳಿ ಮಾರ್ಗ: ಹುಬ್ಬಳ್ಳಿ ಕಡೆಯಿಂದ ಬರುವ ಬಸ್‌ಗಳು ಎಪಿಎಂಸಿ (APMC) ದ್ವಾರ ಅಥವಾ ಅಯ್ಯಪ್ಪ ನಗರ ಕ್ರಾಸ್ ಮೂಲಕ ಸಂಚರಿಸಲಿವೆ. ಬನವಾಸಿ ಮಾರ್ಗ: ಬನವಾಸಿ ಕಡೆಯಿಂದ ಬರುವ ಮತ್ತು ಹೋಗುವ ಬಸ್‌ಗಳಿಗೆ ‘ಬನವಾಸಿ ನಾಖಾ’ ಬಳಿಯೇ ತಾತ್ಕಾಲಿಕ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ.
ಯಲ್ಲಾಪುರ ಹಾಗೂ ಬೆಂಗಳೂರು ಮಾರ್ಗ: ಈ ಮಾರ್ಗದ ಬಸ್‌ಗಳು ಕೋಟೆಕೆರೆ ರಸ್ತೆ ಮತ್ತು ಖಾನ್ ಸಾಮಿಲ್ ಮೂಲಕ ಬನವಾಸಿ ನಾಖಾ ತಲುಪಿ ತಮ್ಮ ಪ್ರಯಾಣ ಮುಂದುವರಿಸಲಿವೆ. ಫೆಬ್ರವರಿ 24 ರಂದು ಕಲಶ ಪ್ರತಿಷ್ಠಾಪನೆ ಹಾಗೂ 25 ರಂದು ಅದ್ಧೂರಿ ರಥೋತ್ಸವ ನಡೆಯಲಿದೆ.
ಈ ಸಂದರ್ಭದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಇರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ಕೋರಲಾಗಿದೆ. ಸಂಚಾರ ವ್ಯವಸ್ಥೆಯಲ್ಲಿನ ಈ ಬದಲಾವಣೆಯು ಮಾರ್ಚ್ 4 ರವರೆಗೆ ಜಾರಿಯಲ್ಲಿರಲಿದ್ದು, ಪ್ರಯಾಣಿಕರು ಸಾರಿಗೆ ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಇಲಾಖೆ ಮನವಿ ಮಾಡಿದೆ.
Tags:
tourism