ಬೀದರ್: ಜಿಲ್ಲೆಯಲ್ಲಿ ಕೃಷಿ ಇಲಾಖೆಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ 2025-26ನೇ ಸಾಲಿನ ಜಿಲ್ಲಾ ಮಟ್ಟದ 'ಸಿರಿಧಾನ್ಯ ಮೇಳ, ಮತ್ಯ ಮೇಳ, ಉದ್ಯೋಗ ಮೇಳ, ಪುಷ್ಪ ಮೇಳ ಮತ್ತು ತೋಟಗಾರಿಕೆ ಮೇಳ-2026' ಭಾನುವಾರ (ಫೆ 22) ಆರಂಭವಾಗಿದೆ. ಎರಡು ದಿನ ಗಳ ಮೇಳಕ್ಕೆ ಇಂದ ಬೆಳಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಸಿರಿಧಾನ್ಯಗಳು ಕೇವಲ ಆಹಾರವಲ್ಲ, ಅವು ಆರೋಗ್ಯಪೂರ್ಣ ಜೀವನದ ಭದ್ರ ಆಧಾರ. ರಾಗಿ, ಜೋಳ, ಸಜ್ಜೆ, ನವಣೆ, ಊದಲು ಮುಂತಾದ ಸಿರಿಧಾನ್ಯಗಳಲ್ಲಿ ನಾರು (ಫೈಬರ್), ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ಅಗತ್ಯ ಖನಿಜಗಳು ಸಮೃದ್ಧವಾಗಿವೆ. ಮಧುಮೇಹ, ರಕ್ತದೊತ್ತಡ, ಸ್ಥೂಲತೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮಕ್ಕಳ ಪೋಷಣೆ, ಗರ್ಭಿಣಿಯರ ಆರೋಗ್ಯ ಮತ್ತು ವೃದ್ಧರ ಪೌಷ್ಟಿಕ ಅಗತ್ಯಗಳಿಗೆ ಸಿರಿಧಾನ್ಯಗಳು ಅತ್ಯುತ್ತಮ ಎಂದು ಅವರುಗಳ ಮಹತ್ವ ತಿಳಿಸಿದರು.
ದೈನಂದಿನ ಆಹಾರದಲ್ಲಿ ಸಿರಿಧಾನ್ಯ ಬಳಸಿ
ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳು ಹವಾಮಾನ ಬದಲಾವಣೆಯ ಸಂದರ್ಭದಲ್ಲಿಯೂ ರೈತರಿಗೆ ಭದ್ರ ಆದಾಯ ನೀಡುವ ಶಾಶ್ವತ ಬೆಳೆಗಳಾಗಿವೆ. ಆರೋಗ್ಯ ಮತ್ತು ಕೃಷಿ ಎರಡನ್ನೂ ಒಟ್ಟಿಗೆ ರಕ್ಷಿಸುವ ಶಕ್ತಿ ಸಿರಿಧಾನ್ಯಗಳಲ್ಲಿ ಅಡಗಿದೆ. ಜನರು ತಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಬೇಕು; ರೈತರು ಮೌಲ್ಯವರ್ಧಿತ ಉತ್ಪನ್ನಗಳತ್ತ ಗಮನಹರಿಸಬೇಕು ಎಂದರು.
ಇನ್ನೂ ಮೇಳದಲ್ಲಿ ಸ್ಥಾಪಿಸಲಾದ ವಿವಿಧ ಇಲಾಖೆಗಳ ಹಾಗೂ ಖಾಸಗಿ ಸಂಸ್ಥೆಗಳ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿ, ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಯುವಕರೊಂದಿಗೆ ಸಂವಾದ ನಡೆಸಲಾಯಿತು. ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನಗಳು, ತೋಟಗಾರಿಕೆ, ಮತ್ಸ್ಯೋದ್ಯಮ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದುಕೊಂಡೆ. ರೈತರು, ಯುವಕರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಇಂತಹ ಮೇಳಗಳು ನಡೆಯುತ್ತಿರಬೇಕು ಎಂದು ಅವರು ತಿಳಿಸಿದರು.
ಹೆಚ್ಚಿನ ಜನರ ಆಗಮನ ನಿರೀಕ್ಷೆ
ಮೇಳಕ್ಕೆ ಬೇರೆ ಬೇರೆ ಭಾಗಗಳಿಂದ ರೈತರು, ತೋಟಗಾರಿಕೆ ಬೆಳೆಗಾರು, ಸಾರ್ವಜನಿಕರು, ವಿದ್ಯಾರ್ಥಿಗಳು ಆಗಮಿಸಿದ್ದು ಕಂಡು ಬಂತು. ಮಡಿಕೆ ಹೂಗಳಿಂದ ವೇದಿಕೆ ಅಲಂಕೃತಗೊಳಿಸಲಾಗಿತ್ತು. ಬೇಸಿಗೆ ಆಗಿದ್ದರಿಂದ ದ್ರಾಕ್ಷಿ, ಕಲ್ಲಂಗಡಿ, ಬೇರೆ ಬೇರೆ ತಳಿಯ ಕಲ್ಲಂಗಡಿ ಇನ್ನಿತರ ಹಣ್ಣುಗಳಿಗೆ ಬೇಡಿಕೆ ಹೆಚ್ಚಿತ್ತು. ರೈತರು ಮೇಳದಲ್ಲಿ ಕೃಷಿ ಉಪಕರಣಗಳ ಖರೀದಿಯಲ್ಲಿ ತೊಡಗಿದ್ದರು. ಎರಡು ದಿನಗಳ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ.