ಬೆಂಗಳೂರು: ಪರಿಶಿಷ್ಟ ಜಾತಿಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪಿಎಂ-ಎಜೆಎವೈ ಯೋಜನೆಯಡಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ ಹಾಗೂ ಚಾಲನಾ ಪರವಾನಗಿ ನೀಡಲು ನಿಗಮ ಮುಂದಾಗಿದೆ.
ಎಲ್ಲೆಲ್ಲಿ ತರಬೇತಿ?
ಈ ಉಚಿತ ತರಬೇತಿ ಕಾರ್ಯಕ್ರಮವನ್ನು ನಿಗಮದ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಹಾಗೂ ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ. ಒಂದು ತಿಂಗಳ ಅವಧಿಯ ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಭಾರೀ ವಾಹನ ಚಾಲನೆಯ ಸಂಪೂರ್ಣ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ವಸತಿ ಹಾಗೂ ಊಟದ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
KSRTC
ಇನ್ನು ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಸಾರಿಗೆ ಇಲಾಖೆ (RTO) ಸಹಯೋಗದಲ್ಲಿ ಉಚಿತವಾಗಿ ಭಾರೀ ವಾಹನ ಚಾಲನಾ ಪರವಾನಗಿ ನೀಡಲಾಗುತ್ತದೆ. ಇದರಿಂದ ತರಬೇತಿ ಪಡೆದ ಯುವಕರು ನೇರವಾಗಿ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸಲು ಅನುಕೂಲವಾಗಲಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಅಭ್ಯರ್ಥಿಗಳು ತಮ್ಮ ಹತ್ತಿರದ ಕೆಎಸ್‌ಆರ್‌ಟಿಸಿ ತರಬೇತಿ ಕೇಂದ್ರಗಳಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲದೇ ksrtcjobs.karnataka.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ವಿವರಗಳನ್ನು ಭರ್ತಿ ಮಾಡಿದ ಬಳಿಕ, ನಿಗಮದ ಕಚೇರಿಯಿಂದಲೇ ಅಭ್ಯರ್ಥಿಗಳನ್ನು ಸಂಪರ್ಕಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಮಳವಳ್ಳಿ-7760990137, ಹಾಸನ-7760990533, ಹೊಳಲ್ಕೆರೆ-7019072560, ಮಾಲೂರು-7760994432, ಚಿಕ್ಕಮಗಳೂರು ಅಭ್ಯರ್ಥಿಗಳು 9606037746 ಸಂಖ್ಯೆಯನ್ನು ಸಂಪರ್ಕಿಸಬಹುದು. ಪರಿಶಿಷ್ಟ ಜಾತಿಯ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆ ಸಾಧಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಭಾರೀ ವಾಹನ ಚಾಲನಾ ಪರವಾನಗಿ ಪಡೆದ ಅಭ್ಯರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಸೇರಿದಂತೆ ಇತರ ಸಾರಿಗೆ ಸಂಸ್ಥೆಗಳು, ಖಾಸಗಿ ಬಸ್, ಲಾರಿ, ಪ್ರವಾಸೋದ್ಯಮ ಹಾಗೂ ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ಈ ಮೂಲಕ ಪರಿಶಿಷ್ಟ ಜಾತಿಯ ಯುವಕರಿಗೆ ಆತ್ಮನಿರ್ಭರ ಜೀವನ ರೂಪಿಸಿಕೊಳ್ಳಲು ಯೋಜನೆ ಸಹಕಾರಿಯಾಗಲಿದೆ. ಪರಿಶಿಷ್ಟ ಜಾತಿಯ ಯುವಕರು ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕೌಶಲ್ಯಾಭಿವೃದ್ಧಿ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ.