ಅಪ್ಪಿತಪ್ಪಿ ಅರ್ಹರು ಎಪಿಎಲ್ ಹೋದರೆ 24 ಗಂಟೆಯೊಳಗೆ ಅರ್ಜಿ ಹಾಕಿದರೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಕೊನೆಗೂ ಗುಡ್ ನ್ಯೂಸ್ ಕೊಟ್ಟ ಆಹಾರ ಸಚಿವ; ಮುಂದಿನ ತಿಂಗಳಿನಿಂದಲೇ ಹೊಸ BPL ಕಾರ್ಡ್ಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್ ದಾರರಿಗೆ ಆಹಾರ ಇಲಾಖೆ ಶಾಕ್ ಕೊಡ್ತಿದೆ. ಈ ವರೆಗೂ ಸುಮಾರು 12 ಲಕ್ಷ ಪಡಿತ ಚೀಟಿಗಳನ್ನು ರದ್ದು ಮಾಡಲು ಆಹಾರ, ನಾಗರಿಕ ಸರಬರಾಜು ಮತ್ತು ವ್ಯವಹಾರಗಳ ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಕುರಿತಂತೆ ಇಲಾಖೆಯ ಸಚಿವರಾದ ಕೆಎಚ್ ಮುನಿಯಪ್ಪ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ, ದಕ್ಷಿಣ ಭಾರತದಲ್ಲಿ ಬಿಪಿಎಲ್ ಕಾರ್ಡ್‌ಗಳು ಕರ್ನಾಟಕದಲ್ಲೇ ಹೆಚ್ಚು, ಶೇಕಡಾ 75 ರಷ್ಟು ಬಿಪಿಎಲ್ ಕಾರ್ಡ್‌ಗಳು ಕರ್ನಾಟಕದಲ್ಲಿ ಇದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ಮಾಡೋದು ಅನಿವಾರ್ಯ ಎಂದಿರುವ ಸಚಿವರು, ಅನರ್ಹರು ಕಂಡು ಬಂದರೆ ಕಾರ್ಡ್ ರದ್ದು ಮಾಡಲ್ಲ. ಆದರೆ ಅವರನ್ನ ಎಪಿಎಲ್ ಕಾರ್ಡ್‌ಗೆ ಸೇರಿಸಲಾಗುತ್ತದೆ. ಅಪ್ಪಿತಪ್ಪಿ ಅರ್ಹರು ಎಪಿಎಲ್ ಹೋದರೆ 24 ಗಂಟೆಯೊಳಗೆ ಅರ್ಜಿ ಹಾಕಿದರೆ ಪಡಿತರ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಇನ್ನು, ಇದೇ ವೇಳೆ ಹೊಸದಾಗಿ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಲು ಕಳೆದ ಹಲವು ವರ್ಷಗಳಿಂದ ಕಾಯುತ್ತಿರುವ ಜನರಿಗೂ ಗುಡ್ ನ್ಯೂಸ್ ನೀಡಿರುವ ಸಚಿವ ಮುನಿಯಪ್ಪ, ಮುಂದಿನ ತಿಂಗಳು ಬಿಪಿಎಲ್ ಕಾರ್ಡ್ಗಳಿಗೆ ಅರ್ಜಿ ಆಹ್ವಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.
ಅಕ್ರಮವಾಗಿ ಪಡೆದಿರುವ ಪಡಿತರ ಚೀಟಿಗಳನ್ನು ರದ್ದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಈಗಾಗಲೇ ಅನುಮಾನಸ್ಪಾದವಾಗಿ ಕಂಡು ಬಂದಿರುವ ಪಡಿತರ ಚೀಟಿಗಳನ್ನು ಪಟ್ಟಿ ಮಾಡಲಾಗಿದ್ದು, ಈ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳ ಎದುರು ಪ್ರದರ್ಶನ ಮಾಡಲಾಗಿದೆ. ಆ ಪಡಿತರ ಕಾರ್ಡ್ ದಾರರು ಪಡಿತರ ಪಡೆದುಕೊಳ್ಳಲು ಆಗಮಿಸಿದ ಮೇಲೆ ನ್ಯಾಯ ಬೆಲೆ ಅಂಗಡಿ ಮಾಲೀಕರು ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಾರೆ.
ಇದರಂತೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲೇ ಅತ್ಯಧಿಕ ಜನರು ಸುಳ್ಳು ಮಾಹಿತಿ ನೀಡಿ ಪಡಿತ ಚೀಟಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೊರ ರಾಜ್ಯದಿಂದ ಬಂದು ರಾಜ್ಯದಲ್ಲಿ ಅಕ್ರಮವಾಗಿ ಪಡಿತರ ಚೀಟಿ ಪಡೆದುಕೊಂಡವರ ಸಂಖ್ಯೆಯೂ ಸುಮಾರು 50 ಸಾವಿರದಷ್ಟಿದೆ ಎಂದು ತಿಳಿದು ಬಂದಿದೆ.
ಅನರ್ಹ ಬಿಪಿಎಲ್ ಕಾರ್ಡ್ಗಳ ವಿವರ ನೋಡುವುದಾದರೆ, ಮೃತಪಟ್ಟವರ ಹೆಸರು ಡಿಲೀಟ್ ಮಾಡದೇ ಇರುವ 1,446 ಕಾರ್ಡ್ ಗಳು, ಅಂತರರಾಜ್ಯ ಪಡಿತರ ಚೀಟಿದಾರರು 57,864, 25 ಲಕ್ಷ ರೂ.ಮೇಲಿನ ಜಿಎಸ್ಟಿ ವ್ಯವಹಾರ ನಡೆಸಿರುವ 2,684 ಕಾರ್ಡ್ ದಾರರು, 1.20 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಇರುವ 5,13,613 ಕಾರ್ಡ್ ದಾರರು, ಕಂಪನಿಗಳಲ್ಲಿ ಡೈರೆಕ್ಟರ್ ಆಗಿರುವವರು 19,690 ಕಾರ್ಡ್ ದಾರರು, 7.5 ಎಕರೆ ಹೆಚ್ಚಿನ ಜಮೀನು ಹೊಂದಿರುವವರು 33,456 ಕಾರ್ಡ್ ದಾರರು ಸೇರಿದಂತೆ ಇ-ಕೆವೈಸಿ ಮಾಡಿಸದೆ ಇರುವ 6,16,196 ಕಾರ್ಡ್ ಗಳನ್ನು ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲು ಆಹಾರ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದು ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಬಿಪಿಎಲ್ ಕಾರ್ಡ್ ರದ್ದು ಆದ್ರೆ ಅವರು ಗ್ಯಾರಂಟಿ ಅನುಷ್ಠಾನ ಸಮಿತಿ ಸಂಪರ್ಕ ಮಾಡಬೇಕು. ಬಿಪಿಎಲ್ ಕಾರ್ಡ್ ಸಮಸ್ಯೆಗಳ ಪರಿಹಾರ, ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ಸಮಿತಿ ಮಾಡಲಾಗಿದೆ. ಅಂತಹ ಸಮಸ್ಯೆಗಳ ಬಗ್ಗೆ ಅವರು ನೋಡಿಕೊಳ್ಳಬೇಕು. ಗ್ಯಾರಂಟಿ ಯೋಜನೆಗಳನ್ನು ಅತಿ ಕಡು ಬಡವರಿಗಾಗಿಯೇ ನಾವು ಮಾಡಿದ್ದೇವೆ, ನಾನು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಿಗೆ ಮನವಿ ಮಾಡುತ್ತೇನೆ. ಇಂತಹ ಸಮಸ್ಯೆಗಳ ಬಗ್ಗೆ ಸಮಿತಿ ಸದಸ್ಯರ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.