Kusum-C Solar Scheme- ರೈತರ ಕೃಷಿ ಪಂಪ್‌ಸೆಟ್’ಗಳಿಗೆ ಇನ್ಮುಂದೆ ಹಗಲಲ್ಲಿ ಕರೆಂಟ್ | ಕುಸುಮ್-ಸಿ ಸೋಲಾರ್ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

By SVR Creations

ಇನ್ಮುಂದೆ ರೈತರು ನೀರಾವರಿ ವಿದ್ಯುತ್‌ಗಾಗಿ ಪರಿತಪಿಸುವ ಅಗತ್ಯವಿಲ್ಲ. ನಿದ್ದೆಗೆಟ್ಟು ರಾತ್ರಿ ಇಡೀ ನೀರು ಹಾಯಿಸುವ ತಾಪತ್ರಯ ಇರುವುದಿಲ್ಲ. ಕೃಷಿ ಪಂಪ್‌ಸೆಟ್’ಗಳಿಗೆ ಹಗಲು ಹೊತ್ತಿನಲ್ಲೇ ಬರೋಬ್ಬರಿ 7 ತಾಸು ವಿದ್ಯುತ್ ಪೂರೈಸುವ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ರೈತರ ಬಾಳಲ್ಲಿ ‘ಕುಸುಮ್-ಸಿ’ ಹೊಸ ಬೆಳಕು

ಹೌದು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಸುವ ‘ಕುಸುಮ್-ಸಿ’ (KUSUM-C) ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜೂನ್ 11) ಚಾಲನೆ ನೀಡಲಿದ್ದಾರೆ. ಆ ಮೂಲಕ ರೈತರಿಗೆ ಹಗಲು ಹೊತ್ತಿನಲ್ಲಿ ವಿದ್ಯುತ್ ಪೂರೈಸುವ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ.

ಏನಿದು ‘ಕುಸುಮ್-ಸಿ ಯೋಜನೆ’? ಇದರ ಅನುಷ್ಠಾನ ಹೇಗೆ? ರೈತರಿಗೆ ಈ ಯೋಜನೆಯಿಂದ ವಿದ್ಯುತ್ ಹೇಗೆ ಪೂರೈಸಲಾಗುತ್ತದೆ? ಇತ್ಯಾದಿ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ವಿವರಣೆ ನೀಡಿದ್ದು; ಅದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಯೋಜನೆಯ ಹಿನ್ನಲೆ ಮತ್ತು ಉದ್ದೇಶ

ಕೇಂದ್ರ ಸರ್ಕಾರದ ‘ಕಿಸಾನ್ ಉರ್ಜಾ ಸುರಕ್ಷಾ ಮತ್ತು ಉತ್ಥಾನ್ ಮಹಾಭಿಯಾನ್ (KUSUM)’ ಯೋಜನೆಯ ಭಾಗವಷ್ಟೆ ಈ ‘ಸಿ’ ಘಟಕ. 

ಇದರ ಮುಖ್ಯ ಉದ್ದೇಶ:

  • ಹಗಲು ವೇಳೆ ಕೃಷಿಗೆ ಸ್ಥಿರ ವಿದ್ಯುತ್ ಪೂರೈಕೆ.
  • ರೈತರ ವಿದ್ಯುತ್ ಅವಲಂಬನೆಗೆ ಶಾಶ್ವತ ಪರಿಹಾರ.
  • ಸೌರ ಉತ್ಪಾದನೆ ಮೂಲಕ ಪರಿಸರ ಸ್ನೇಹಿ ಶಕ್ತಿಯ ಬಳಕೆ.
  • ಟ್ರಾನ್ಸ್ಮಿಷನ್ ನಷ್ಟವನ್ನು ಕಡಿಮೆ ಮಾಡಿ, ಸ್ಥಳೀಯ ಉತ್ಪಾದನೆಯೇ ಪೂರೈಕೆ.

ಚಿಕ್ಕಬಳ್ಳಾಪುರದಿಂದ ಯೋಜನೆಗೆ ಅಧಿಕೃತ ಚಾಲನೆ

2025ರ ಜೂನ್ 11ರಂದು, ಗೌರಿಬಿದನೂರಿನ ಹನುಮೇನಹಳ್ಳಿ ಮತ್ತು ಚರಕ ಮಟ್ಟೇನಹಳ್ಳಿ ಗ್ರಾಮಗಳಲ್ಲಿ 20 ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆಯ ಮೂಲಕ ‘ಕುಸುಮ್-ಸಿ’ ಯೋಜನೆಗೆ ಅಧಿಕೃತ ಚಾಲನೆ ಸಿಗಲಿದೆ.

60 ಎಕರೆ ಖಾಸಗಿ ಭೂಮಿಯನ್ನು ರಾಜ್ಯ ಸರ್ಕಾರ 25 ವರ್ಷಗಳ ಅವಧಿಗೆ ಸರ್ಕಾರ ಭೋಗ್ಯಕ್ಕೆ ಪಡೆದುಕೊಂಡಿದೆ. ಇದು ರಾಜ್ಯದ ಅತಿದೊಡ್ಡ ಸೌರ ಘಟಕವಾಗಿದ್ದು, ಈ ಮಾದರಿ ಇತರೆ ಜಿಲ್ಲೆಗಳಿಗೆ ಪ್ರೇರಣೆಯಾಗಲಿದೆ.

ಸರ್ಕಾರ ಕುಸುಮ್-ಸಿ ಯೋಜನೆಗೆ ಚಾಲನೆ ನೀಡಿದ್ದು; ಇದರಿಂದ ರೈತರ ಕೃಷಿಗೆ ಹಗಲು ಹೊತ್ತಿನಲ್ಲಿ ಕರೆಂಟ್ ಸಿಗಲಿದೆ. ಈ ಯೋಜನೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ...

ಯೋಜನೆಯ ಕಾರ್ಯವಿಧಾನ ಹೇಗೆ?

‘ಕುಸುಮ್-ಸಿ’ ಯೋಜನೆಯಡಿ ಕೃಷಿ ಫೀಡರ್‌ಗಳ ಸಮೀಪ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಸೂರ್ಯ ಬೆಳಕಿನಿಂದ ಉಂಟಾಗುವ ವಿದ್ಯುತ್ ನೇರವಾಗಿ ಆ ಭಾಗದ ಪಂಪ್‌ಸೆಟ್‌ಗಳಿಗೆ ಪೂರೈಕೆ ಆಗುತ್ತದೆ. ಇದರಿಂದ ಹೈ ವೋಲ್ಟೇಜ್ ಲೈನ್‌ಗಳ ಅವಶ್ಯಕತೆ ಕಡಿಮೆಯಾಗುತ್ತದೆ ಹಾಗೂ ಟ್ರಾನ್ಸ್’ಫಾರ್ಮರ್‌ಗಳ ಮೇಲಿನ ಒತ್ತಡವೂ ಇಳಿಯುತ್ತದೆ.

ಹಗಲು ಕರೆಂಟ್- ರೈತರ ಕನಸು ಸಾಕಾರ

ಈ ಯೋಜನೆಯ ದೆಸೆಯಿಂದ ರಾಜ್ಯಾದ್ಯಂತ ಬರೋಬ್ಬರಿ 6.19 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್ ಪೂರೈಕೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈಗಾಗಲೇ 200 ಮೆಗಾವಾಟ್ ಘಟಕ ಕಾರ್ಯನಿರ್ವಹಿಸುತ್ತಿದ್ದು, 545 ಮೆಗಾವಾಟ್ ಘಟಕಗಳು ರಾಜ್ಯ ಬೇರೆ ಬೇರೆ ಜಿಲ್ಲೆಗಳ 93 ಸ್ಥಳಗಳಲ್ಲಿ ನಿರ್ಮಾಣ ಹಂತದಲ್ಲಿವೆ. 2025ರ ಡಿಸೆಂಬರ್ ಒಳಗೆ ಒಟ್ಟು 2,400 ಮೆಗಾವಾಟ್ ಸಾಮರ್ಥ್ಯದ ಘಟಕ ಸ್ಥಾಪನೆಯಾಗಲಿವೆ.

1 ಮೆಗಾವಾಟ್ ಸೌರ ಘಟಕ ಸ್ಥಾಪನೆಗೆ ₹3.5 ರಿಂದ ₹4 ಕೋಟಿ ವರೆಗೆ ವೆಚ್ಚವಾಗಲಿದ್ದು; ಕೇಂದ್ರ ಸರ್ಕಾರದಿಂದ ₹1 ಕೋಟಿ ಸಬ್ಸಿಡಿ ಸಿಗುತ್ತದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿ ಯೂನಿಟ್‌ಗೆ ₹3.17 ದರ ನಿಗದಿ ಮಾಡಿದೆ.

ವರ್ಷದೊಳಗೆ 1.5 ಲಕ್ಷ ಅಕ್ರಮ ಪಂಪ್‌ಸೆಟ್ ಸಕ್ರಮ

ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ 4.5 ಲಕ್ಷ ಪಂಪ್‌ಸೆಟ್‌ಗಳ ಪೈಕಿ ಈಗಾಗಲೇ 3 ಲಕ್ಷ ಸಕ್ರಮಗೊಂಡಿವೆ. 2023ರ ಸೆಪ್ಟೆಂಬರ್ 22ರ ನಂತರ ಸ್ಥಾಪಿತ ಅಕ್ರಮ ಪಂಪ್‌ಸೆಟ್‌ಗಳಿಗೆ ಶೀಘ್ರ ಸಂಪರ್ಕ ಯೋಜನೆ ಜಾರಿಯಲ್ಲಿದೆ.

ರೈತರು ತಮ್ಮ ವೆಚ್ಚದಲ್ಲಿ ಲೈನ್ ಮತ್ತು ತಾಂತ್ರಿಕ ಮೂಲಸೌಕರ್ಯ ಕಲ್ಪಿಸಿದರೆ, ಎಸ್ಕಾಂ ಟ್ರಾನ್ಸ್ಫಾರ್ಮರ್ ನೀಡುತ್ತದೆ. ಉಳಿದ 1.5 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ವರ್ಷದಲ್ಲಿ ಸಕ್ರಮಗೊಳಿಸುವ ಗುರಿ ಇದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ತಿಳಿಸಿದ್ದಾರೆ.

ಕುಸಯಮ್-ಸಿ ಯೋಜನೆಯಿಂದಾಗುವ ಪ್ರಯೋಜನಗಳು

ಹಗಲು ವಿದ್ಯುತ್ ಪೂರೈಕೆ ಆಗುವುದರಿಂದ ರದೈತರು ರಾತ್ರಿಯೆಲ್ಲ ನಿದ್ದಗರಟ್ಟು ಬೆಳೆಗಳಿಗೆ ನೀರು ಹಾಯಿಸುವ ತಾಪತ್ರಯ ಇರುವುದಿಲ್ಲ.

ಸದರಿ ವಿದ್ಯುತ್ ಸ್ಥಳೀಯವಾಗಿಯೇ ಉತ್ಪಾದನೆ ಆಗುವುದರಿಂದ ವೋಲ್ಟೇಜ್ ವ್ಯತ್ಯಾಸ ಕಡಿಮೆ, ಟ್ರಾನ್ಸ್ಮಿಷನ್ ನಷ್ಟ ಕಡಿಮೆ

ವಿದ್ಯುತ್ ವಿತರಣೆಯಲ್ಲಿ ದಕ್ಷತೆ ಬರಲಿದ್ದು; ಟ್ರಾನ್ಸ್’ಫಾರ್ಮರ್ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಕುಸುಮ್ ಬಿ ಯೋಜನೆ ಅನುಷ್ಠಾನಗೊಳ್ಳುತ್ತಿರುವುದರಿಉಂದ ಉದ್ಯೋಗ ಸೃಷ್ಟಿಯಾಗಲಿದೆ.

ಕುಸುಮ್-ಸಿ ಯೋಜನೆಯು, ಕೇವಲ ವಿದ್ಯುತ್ ಯೋಜನೆ ಅಲ್ಲ. ಇದು ರೈತರ ಪಾಲಿಗೆ ಹೊಸ ಬೆಳಕು. ಹಗಲು ವೇಳೆಯಲ್ಲಿ ನಿರಂತರ ವಿದ್ಯುತ್ ಪೂರೈಕೆಯಿಂದ ರೈತರ ಬದುಕು ಸುಗಮವಾಗುತ್ತ್ತದೆ. ನಿರಂತರ ವಿದ್ಯುತ್ ಪೂರೈಕೆ ಆಗುವುದರಿಂದ ಬೆಳೆನಷ್ಟ ತಪ್ಪಿ ರೈತರಿಗೆ ನಿರೀಕ್ಷಿತ ಇಳುವರಿ ಕೂಡ ಸಿಗಲಿದೆ.