ಕೇಂದ್ರ ಸರ್ಕಾರ ದೇಶದ ಜನರಿಗೆ ಹೊಸ ಯೋಜನೆಯನ್ನು ಘೋಷಿಸಿದ್ದು, ಮನೆಯ ಮೇಲೆಯೇ ಸೋಲಾರ್ ಘಟಕಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ವಿದ್ಯುತ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇದಕ್ಕಾಗಿ ಪಿಎಂ ಸೂರ್ಯ ಘರ್ : ಮುಫ್ತ ಬಿಜ್ಲಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, 30 ಸಾವಿರ ರೂಪಾಯಿಯಿಂದ 78 ಸಾವಿರ ರೂಪಾಯಿವರೆಗೆ ಸಬ್ಸಿಡಿಯನ್ನು ನೀಡಲಿದೆ. ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ವಿವರ ಇಲ್ಲಿದೆ.
ಕೇಂದ್ರ ಸರ್ಕಾರ ಪಿಎಂ ಸೂರ್ಯ ಘರ್ :
ಮುಫ್ತ್ ಬಿಜ್ಲಿ ಯೋಜನೆ (PM Surya Ghar : Muft Bijli Yojna) ಎಂಬ ಹೊಸ ಯೋಜನೆಯನ್ನು ಘೋಷಿಸಿದೆ. ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಸೂರ್ಯೋದಯ ಯೋಜನೆಯೇ ಇದಾಗಿದೆ. ಮನೆಯ ಮೇಲ್ಛಾವಣಿಯ ಸೌರಶಕ್ತಿ ಯೋಜನೆ ಇದಾಗಿದ್ದು, ಈ ಯೋಜನೆಯಿಂದ ಸುಮಾರು ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ದೊರೆಯಲಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಹಾಗೂ ಜನರ ಕಲ್ಯಾಣ ಹೆಚ್ಚಿಸಲು ಪಿಎಂ ಸೂರ್ಯ ಘರ್ : ಮುಫ್ತ್ ಬಿಜ್ಲಿ ಯೋಜನೆಯನ್ನು ಜಾರಿ ತರಲಾಗಿದೆ ಎಂದು ತಿಳಿಸಿದ್ದಾರೆ. ಜನರು ಮನೆ ಮೇಲೆಯೇ ಸೌರ ಘಟಕಗಳನ್ನು ಸ್ಥಾಪಿಸಿ ವಿದ್ಯುತ್ ಉತ್ಪಾದಿಸಬಹುದಾಗಿದೆ.
ಒಂದು ಕೋಟಿ ಕುಟುಂಬಗಳಿಗೆ ಯೋಜನೆಯ ಲಾಭ!
ಈ ಉಪಕ್ರಮವು 75 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆ ಹೊಂದಿದ್ದು, ಸುಮಾರು 1 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿವೆ. ಮಾಸಿಕ 300 ಯೂನಿಟ್ ಉಚಿತ ವಿದ್ಯುತ್ ಅನ್ನು ಈ ಯೋಜನೆಯ ಫಲಾನುಭವಿ ಕುಟುಂಬಗಳು ಪಡೆಯಲಿವೆ.
ಜನರಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪುಗೊಳಿಸಿದ್ದು, ನೇರವಾಗಿ ಜನರ ಬ್ಯಾಂಕ್ ಖಾತೆಗೆ ಸಬ್ಸಿಡಿಯನ್ನು ನೀಡಲು ಮುಂದಾಗಿದೆ, ಜೊತೆಗೆ ಹೆಚ್ಚಿನ ರಿಯಾಯಿತಿಯಲ್ಲಿ ಏಕೀಕೃತ ಬ್ಯಾಂಕ್ ಸಾಲವನ್ನು ನೀಡಲು ಮುಂದಾಗಿದೆ. ಎಲ್ಲ ಸ್ಟೇಕ್ ಹೋಲ್ಡರ್‌ಗಳನ್ನು ಏಕೀಕೃತ ರಾಷ್ಟ್ರೀಯ ಆನ್‌ಲೈನ್ ಪೋರ್ಟಲ್‌ನಲ್ಲಿ ಕೇಂದ್ರಿಕರಿಸಿದ್ದು, ಜನರಿಗೆ ಇದರಿಂದ ಅನುಕೂಲವಾಗಲಿದೆ.
ಈ ಯೋಜನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಲು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳಿಗೆ ತಮ್ಮ ಪ್ರದೇಶದಲ್ಲಿ ಮನೆಯ ಛಾವಣಿಯ ಮೇಲೆ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಉತ್ತೇಜನ ನೀಡಲಾಗುವುದು. ಜೊತೆಗೆ ಈ ಯೋಜನೆಯು ಆದಾಯವನ್ನು ಹೆಚ್ಚಿಸುವ, ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವ ಮತ್ತು ಉದ್ಯೋಗಾಕಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ.
ಸಬ್ಸಿಡಿ ಎಷ್ಟು ಸಿಗಲಿದೆ?
ಕೇಂದ್ರ ಸರ್ಕಾರ ಮೂರು ರೀತಿಯ ಸಬ್ಸಿಡಿಯನ್ನು ಈ ಯೋಜನೆಯಲ್ಲಿ ನೀಡುತ್ತಿದೆ.
- 150 ಯೂನಿಟ್‌ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 1 ರಿಂದ 2 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 30 ಸಾವಿರ ರೂ.ನಿಂದ 60 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.
- 150 ರಿಂದ 300 ಯೂನಿಟ್‌ವರೆಗೂ ವಿದ್ಯುತ್ ಬಳಸುವ ಮನೆಗಳಿಗೆ 2 ರಿಂದ 3 ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 60 ಸಾವಿರ ರೂ.ನಿಂದ 78 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ.
- 300 ಯೂನಿಟ್‌ಗೂ ಹೆಚ್ಚು ವಿದ್ಯುತ್ ಬಳಸುವ ಮನೆಗಳಿಗೆ 3ಕ್ಕಿಂತ ಹೆಚ್ಚು ಕಿಲೋ ವ್ಯಾಟ್ ಘಟಕ ಅಗತ್ಯ ಇದೆ. ಅದಕ್ಕಾಗಿ 78 ಸಾವಿರ ರೂ. ಸಬ್ಸಿಡಿ ಸಿಗಲಿದೆ.
ಪಿಎಂ ಸೂರ್ಯ ಘರ್ :
ಮುಫ್ತ್ ಬಿಜ್ಲಿ ಯೋಜನೆಗೆ http://pmsuryaghar.gov.in ಮೂಲಕ ಅರ್ಜಿ ಸಲ್ಲಿಸಬಹುದು.
